top of page
Search

ಚನ್ನರಾಯನದುರ್ಗ ಕೋಟೆ: ಸಿಂಹಾವಲೋಕನ

  • Writer: apoorva035
    apoorva035
  • Dec 17, 2024
  • 3 min read

ಕರ್ನಾಟಕದ ಶ್ರೀಮಂತ ಇತಿಹಾಸ ಮತ್ತು ಪರಂಪರೆಯ ಅನೇಕ ಸಾಕ್ಷಿಗಳಲ್ಲ ಒಂದಾದ ಚನ್ನರಾಯನದುರ್ಗ ಕೋಟೆಗೆ ಸುಸ್ವಾಗತ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿರುವ ಈ ಕೋಟೆಯು ಶೌರ್ಯ, ಪರಾಕ್ರಮ, ತಂತ್ರಜ್ಞಾನ, ಮತ್ತು ಯುದ್ದ ಕೌಶಲ್ಯತೆಗಳ ಮೂಕಸಾಕ್ಷಿಯಾಗಿ ತನ್ನ ಕಥೆಯನ್ನು ಹೇಳಲು ಕೈ ಬೀಸಿ ಕರೆಯುತ್ತಿದೆ. 16ನೇ ಶತಮಾನದ ಆಸುಪಾಸಿನಲ್ಲಿ ಚಿಕ್ಕಪ್ಪ ಗೌಡರಿಂದ ನಿರ್ಮಿಸಲ್ಪಟ್ಟ ಈ ಬೆಟ್ಟದ ಕೋಟೆಯು ಶತಮಾನಗಳ ಐತಿಹಾಸಿಕ ವಿಕಸನಕ್ಕೆ ಸಾಕ್ಷಿಯಾಗಿದೆ. ಇದು ಇತಿಹಾಸದ ಉತ್ಸಾಹಿಗಳು, ಚಾರಣಿಗರು (ಟ್ರೆಕ್ಕರ್ಸ್‌) ಮತ್ತು ಪರಿಶೋಧಕರಿಗೆ ಭೇಟಿ ನೀಡಲೇಬೇಕಾದ ತಾಣವಾಗಿದೆ.

ಐತಿಹಾಸಿಕ ಅವಲೋಕನ

ಮೂಲ:

ಚಿಕ್ಕಪ್ಪ ಗೌಡರಿಗೆ ತೋಂಟೇಂದ್ರ, ಚೆನ್ನಪ್ಪ ಗೌಡ ಮತ್ತು ಸಪ್ಪೇಂದ್ರ ಎಂಬ ಮೂವರು ಮಕ್ಕಳಿದ್ದರು. ದುರಂತ ಸರಣಿಯ ಘಟನೆಗಳಿಂದ ಚಿಕ್ಕಪ್ಪ ಗೌಡರು ಚಿಕ್ಕ ವಯಸ್ಸಿನಲ್ಲಿ ನಿಧನರಾದ ತಮ್ಮ ಮಗ ಚೆನ್ನಪ್ಪ ಗೌಡರ ಹೆಸರನ್ನು ಕೋಟೆಗೆ ಹೆಸರಿಸಲು ಕಾರಣವಾಯಿತು. ಸಪ್ಪೇಂದ್ರನಿಗೆ ಮೂವರು ಮಕ್ಕಳಿದ್ದರು ಮತ್ತು ಅವರಿಗೆ ಮಿಡಿಗೇಶಿ, ಮಧುಗಿರಿ ಮತ್ತು ಚನ್ನರಾಯನ ದುರ್ಗ ಪ್ರದೇಶಗಳ ಆಳ್ವಿಕೆಯನ್ನು ನೀಡಲಾಯಿತು. ಅವರು ಈ ಪ್ರದೇಶಗಳನ್ನು ನ್ಯಾಯ, ಧರ್ಮ ಹಾಗು ನೀತಿ ಮಾರ್ಗದಲ್ಲಿ ಆಳಿದರು. ಸಪ್ಪೇಂದ್ರನ ಮೂರನೇ ಮಗ ಕಾಳಪ್ಪ ಗೌಡರಿಗೆ ಇಬ್ಬರು ಮಕ್ಕಳಿದ್ದರು: ರಾಮಪ್ಪ ಮತ್ತು ತಿಮ್ಮಪ್ಪ ಗೌಡರು. ಈ ಇಬ್ಬರು ಸಹೋದರ ನಡುವಿನ ವೈಷಮ್ಯದಿಂದಾಗಿ ಚನ್ನರಾಯನದುರ್ಗವು ಮೈಸೂರು ಒಡೆಯರುಗಳ ಸಾಮ್ರಾಜ್ಯದ ಶ್ರೀ ಚಿಕ್ಕದೇವರಾಜ  ಒಡೆಯರ ವಶವಾಯಿತು.

ಕೋಟೆ ಆಳಿದ ರಾಜವಂಶಗಳು ಮತ್ತು ಅವರ ವಿಜಯಗಳು:

ವರ್ಷಗಳಲ್ಲಿ, ಚನ್ನರಾಯನದುರ್ಗವು ಮೈಸೂರಿನ ಒಡೆಯರ ತದನಂತರ ಬಂದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಕೈ ಸೇರಿದಂತೆ, ಈ ಕೋಟೆ ಸಾಮ್ರಾಜ್ಯದ ರಕ್ಷಣೆಗೆ ಕೇಂದ್ರ ಸ್ಥಳವಾಯಿತು. 18 ನೇ ಶತಮಾನದಲ್ಲಿ, ಕೋಟೆಯು ಮೈಸೂರು ಸಾಮ್ರಾಜ್ಯಕ್ಕೆ, ವಿಶೇಷವಾಗಿ ಟಿಪ್ಪು ಸುಲ್ತಾನನ ಆಡಳಿತದಲ್ಲಿ ಮಹತ್ವದ ಸೇನಾ ಕೇಂದ್ರವಾಗಿ ಕಾರ್ಯನಿರ್ವಹಿಸಿತು.

ಬ್ರಿಟಿಷರ ಆಳ್ವಿಕೆ:

1799 ರಲ್ಲಿ ಟಿಪ್ಪು ಸುಲ್ತಾನನ ಪತನದ ನಂತರ, ಕೋಟೆಯು ಬ್ರಿಟಿಷರ ನಿಯಂತ್ರಣಕ್ಕೆ ಬಂದಿತು. ನಂತರದಲ್ಲಿ ಡ್ಯೂಕ್ ಆಫ್ ವೆಲ್ಲಿಂಗ್ಟನ್,  ಆರ್ಥರ್ ವೆಲ್ಲೆಸ್ಲಿಯು ಚನ್ನರಾಯನದುರ್ಗಕ್ಕೆ ಭೇಟಿ ನೀಡಿ ಅದರ ಅಸಾಧಾರಣ ವಾಸ್ತುಶಿಲ್ಪಕ್ಕೆ ಮಾರುಹೋದನೆಂದು ಐತಿಹಾಸಿಕ ದಾಖಲೆಗಳು ಸೂಚಿಸುತ್ತವೆ.

ವಾಸ್ತು ಶಿಲ್ಪ ಹಾಗು ತಂತ್ರಜ್ಞಾನ

ಚನ್ನರಾಯನದುರ್ಗ ಕೋಟೆ ತಂತ್ರಜ್ಞಾನದ ಮೇರುಕೃತಿ ಎಂದರೆ ಅತಿಶಯೋಕ್ತಿಯಲ್ಲ. ಬೆಟ್ಟದ ಮೇಲಿರುವ, ಕೋಟೆಯ ಬಹು-ಪದರದ ರಕ್ಷಣೆಯು ವೈರಿಯ ಸೈನ್ಯದ ಆಕ್ರಮಣಗಳನ್ನು ತಡೆಯಲು ಚತುರತೆಯಿಂದ ವಿನ್ಯಾಸಗೊಳಿಸಲಾಗಿದೆ. ಇದರ ಕಿರಿದಾದ ಪ್ರವೇಶ ಮಾರ್ಗಗಳು ವೈರಿಯ ಆಕ್ರಮಣಕ್ಕೆ ಸವಾಲುಗಳನ್ನೊಡ್ಡುತ್ತವೆ. ಇದರ ಹುಸಿ ಮಾರ್ಗಗಳು ವೈರಿ ಸೈನ್ಯಗಳಿಗೆ ಕಣ್ಣಾಮುಚ್ಚಾಲೆಯನ್ನಾಡಿಸಿವೆ.

* ಪ್ರಾಚೀನ ಹೆಬ್ಬಾಗಿಲು: ಭದ್ರತೆ ಮತ್ತು ಸೌಂದರ್ಯದ ಮಿಶ್ರಿತ ಕಲಾಕೌಶಲ್ಯದಿಂದ ವಿನ್ಯಾಸಗೊಳಿಸಲಾಗಿದೆ.

* ಕಾವಲು ಗೋಪುರ (ವಾಚ್‌ಟವರ್‌) ಮತ್ತು ಬುರುಜುಗಳು: ಈ ರಚನೆಗಳು ಸುತ್ತಮುತ್ತಲಿನ ಕಾಡುಗಳು ಮತ್ತು ಬಯಲು ಪ್ರದೇಶಗಳ ವಿಹಂಗಮ ನೋಟವನ್ನು ನೀಡುತ್ತವೆ, ಅವುಗಳನ್ನು ಕಣ್ಗಾವಲು ಮಾಡಲು ಸೂಕ್ತವಾಗಿದೆ. ಸೈನಿಕ ಕಾವಲುಗಾರರು ಸುತ್ತಮುತ್ತಲಿನ ಭೂಪ್ರದೇಶದ ವಿಸ್ತಾರವಾದ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಡಲು ಮತ್ತು ಶತ್ರುಗಳ ಚಲನವಲನಗಳನ್ನು ಮುಂಚಿತವಾಗಿ ಗುರುತಿಸಲು ಅವಕಾಶ ಮಾಡಿಕೊಟ್ಟವು. ವಾಚ್‌ಟವರ್‌ಗಳು ನಾಲ್ಕು ದಿಕ್ಕುಗಳ ನೋಟವಿಡುವ, ಹೊಂಚುದಾಳಿಗಳ ಆಸೆ ಪೂರೈಸದಿರಲು ಅಸಾಧ್ಯವಾಗುವಂತೆ ಮಾಡಿತು.

* ಮಳೆನೀರು ಶೇಖರಣಾ ವ್ಯವಸ್ಥೆಗಳು: ವರ್ಷಪೂರ್ತಿ ಪೂರೈಕೆಗಾಗಿ ಕಲ್ಲು ಕೊರೆದು ನಿರ್ಮಿತಗೊಂಡ ಕೆರೆ, ಕೊಳಗಳು, ನೀರನ್ನು ಸಂಗ್ರಹಿಸುವ ಚತುರ ವಿಧಾನಗಳಾಗಿವೆ.

ಮಿಲಿಟರಿ ತಂತ್ರಗಳು ಮತ್ತು ಕಾರ್ಯತಂತ್ರದ ಚತುರತೆ

ಕೋಟೆಯ ವಿನ್ಯಾಸವು ಯುದ್ಧ ಮತ್ತು ರಕ್ಷಣೆಗಳ ಆಳವಾದ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ, ಅದರ ರಕ್ಷಣಾತ್ಮಕ ಶಕ್ತಿಯನ್ನು ವೃದ್ದಿಸಲು ಅನೇಕ ತಂತ್ರಗಳನ್ನು ಪ್ರಾಯೋಜಿಸಿದ್ದಾರೆ. ದಾಳಿಕೋರರ ವಿರುದ್ಧ ಚನ್ನರಾಯನದುರ್ಗ ಹೇಗೆ ಸೆಟೆದು ಸವಾಲೊಡ್ಡಿ ನಿಂತಿದೆ ಎಂಬುದಕ್ಕೆ ಕೆಲ ಉದಾಹರಣೆಗಳು:

ಕ್ಲಿಷ್ಟ ಪ್ರವೇಶ ಮಾರ್ಗಗಳು

* ಕೋಟೆಗೆ ಹೋಗುವ ಕಿರಿದಾದ ಮತ್ತು ಅಂಕುಡೊಂಕಾದ ಮಾರ್ಗಗಳು ಎದುರಾಳಿಗೆ ನೈಸರ್ಗಿಕ ತಡೆಗೋಡೆಗಳಾಗಿ ಕಾರ್ಯನಿರ್ವಹಿಸುತ್ತವೆ.

* ಈ ರಹಸ್ಯ ಪ್ರವೇಶಗಳು ರಕ್ಷಕರಿಗೆ ದಾಳಿಕೋರರ ಸೈನ್ಯದ ಮೇಲೆ ಅನಿರೀಕ್ಷಿತ ಪ್ರತಿದಾಳಿಗಳನ್ನು ನಡೆಸಲು ಮತ್ತು ಮುತ್ತಿಗೆಗಳ ಸಮಯದಲ್ಲಿ ಸುರಕ್ಷಿತವಾಗಿ ಹಿಮ್ಮೆಟ್ಟಲು ಅವಕಾಶ ಮಾಡಿಕೊಟ್ಟವು.

ಸುತ್ತಲಿನ ಭೂಪ್ರದೇಶದೊಂದಿಗೆ ಸ್ಪಂದಿಸಿ, ವಿಲೀನಗೊಂಡ ಕೋಟೆ

* ಕೋಟೆಯು ಸುತ್ತಮುತ್ತಲಿನ ಕಲ್ಲು, ಬೆಟ್ಟ ಗುಡ್ಡಗಳೊಡನೆ ಬೆರೆಯುವಂತೆ ನಿರ್ಮಿಸಲಾಗಿದೆ, ಇಲ್ಲಿ ನೈಸರ್ಗಿಕ ರಚನೆಗಳಿಂದ ಮಾನವ ನಿರ್ಮಿತ ರಚನೆಗಳನ್ನು ಪ್ರತ್ಯೇಕಿಸಲು ಕಷ್ಟಕರವಾಗಿದೆ. ಈ ಮರೆಮಾಚುವಿಕೆಯು ಹೆಚ್ಚುವರಿ ರಕ್ಷಣೆಯ ಪದರವಾಗಿ ಕಾರ್ಯನಿರ್ವಹಿಸುತ್ತದೆ.

* ಕಡಿದಾದ ಬೆಟ್ಟದ ಇಳಿಜಾರುಗಳು, ಮೇಲೇರುವ ಶತ್ರುಗಳ ಪ್ರಗತಿಯನ್ನು ಜಟಿಲಗೊಳಿಸುತವೆ, ಮುತ್ತಿಗೆಯು ಸಮಯ ತೆಗೆದುಕೊಳ್ಳುವಂತೆ ಮಾಡುತ್ತದೆ

ತೋಪುಗಳು ಮತ್ತು ಫಿರಂಗಿಗಳು

* ಕೋಟೆಯ ಬುರುಜುಗಳು ಫಿರಂಗಿಗಳು ಮತ್ತು ಫಿರಂಗಿಗಳಿಗೆ ಸಪಾಟ ವೇದಿಕೆಗಳನ್ನು ಹೊಂದಿದ್ದು, ದೊಡ್ಡ ಪ್ರಮಾಣದ ಆಕ್ರಮಣಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ರಕ್ಷಕರಿಗೆ ಒದಗಿಸುತ್ತವೆ.

* ಫಿರಂಗಿಯನ್ನಳವಡಿಸುವ ನಿಯೋಜನೆಗಳು ಎಲ್ಲಾ ದಿಕ್ಕುಗಳಿದ್ದು, ಇದು ಅಸಾಧಾರಣ ಆಕ್ರಮಣಕಾರಿ ರಕ್ಷಣೆಯನ್ನು ಸೃಷ್ಟಿಸುತ್ತದೆ.

ಟಿಪ್ಪು ಸುಲ್ತಾನನ ಕಾಲದಲ್ಲಿ ಕೋಟೆಗಳು

1781-82ರಲ್ಲಿ ಹೈದರ್ ಅಲಿಯ ಮರಣದ ನಂತರ, ಕೋಟೆಯು ಟಿಪ್ಪು ಸುಲ್ತಾನನ ನಿಯಂತ್ರಣಕ್ಕೆ ಬಂದಿತು. ಇದು ಗಮನಾರ್ಹ ಬದಲಾವಣೆಗಳಿಗೆ ನಾಂದಿಯಾಯಿತು. ಕೋಟೆಯನ್ನು ನಿರ್ಮಿಸಲು ಸುಣ್ಣದ ಗಾರೆ ಬಳಸಲಾಗುತ್ತಿತ್ತು, ಇದರ ಬದಲು ಇಟ್ಟಿಗೆಗಳಿಂದ ಮಾಡಲಾಗಿತ್ತು. ಟಿಪ್ಪು ಸುಲ್ತಾನ್ಮೈ ಸೂರು ರಾಜ್ಯದಾದ್ಯಂತ ಎಲ್ಲಾ ಕೋಟೆಗಳಲ್ಲಿ ಈ ರೀತಿಯ ನಿರ್ಮಾಣವನ್ನು ಜಾರಿಗೆ ತಂದನು. ಕೋಟೆಯ ಮಧ್ಯಭಾಗದಲ್ಲಿ, ಯುದ್ಧಕ್ಕೆ ಬೇಕಾಗುವ ಅನೇಕ ರಚನೆಗಳನ್ನು ನೀವು ನೋಡಬಹುದು, ಇದು ಬಂದೂಕುಗಳನ್ನು ಆಯಕಟ್ಟಿನ ಸ್ಥಾನದಲ್ಲಿ ಇರಿಸಲು ಅನುವು ಮಾಡಿಕೊಡುತ್ತದೆ. ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯ ಎಲ್ಲಾ ಕೋಟೆಗಳಲ್ಲಿ ಅಂತಹ ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಲಾಗಿದೆ ಎಂದು ಖಚಿತಪಡಿಸಿಕೊಂಡನು. ಒಂದು ದೊಡ್ಡ ಸೈನ್ಯಾಪಡೆಯನ್ನು (ಗ್ಯಾರಿಸನ್) ಇಲ್ಲಿ ಸ್ಥಾಪಿಸಲಾಯಿತು, ಇದು ಪ್ರಮುಖ ಮಿಲಿಟರಿ ತಾಣವಾಯಿತು.

ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ, ಕೋಟೆಯು ಮತ್ತಷ್ಟು ಮಿಲಿಟರೀಕರಣಕ್ಕೆ ಒಳಗಾಯಿತು:

* ಕೋಟೆಯ ಭದ್ರತೆ: ಬ್ರಿಟಿಷ್ ಫಿರಂಗಿ ದಾಳಿಗಳನ್ನು ಎದುರಿಸಲು ಬಲವಾದ ಗೋಡೆಗಳು ಮತ್ತು ಬಲವರ್ಧಿತ ಬುರುಜುಗಳನ್ನು ಸೇರಿಸಲಾಯಿತು.

* ಸೈನ್ಯಾಪಡೆಗಳು: ಟಿಪ್ಪು ಸುಲ್ತಾನ್ ಕೋಟೆಯಲ್ಲಿ ಯುದ್ಧ ನೈಪುಣ್ಯತೆಯುಳ್ಳ ಸೈನಿಕರು ಮತ್ತು ಯುದ್ದಕ್ಕೆ ಬೇಕಾಗುವ ಸಂಪನ್ಮೂಲಗಳನ್ನು ಇರಿಸಿದರು,ಮೈಸೂರು ಯುದ್ಧಗಳ ಸಮಯದಲ್ಲಿ ಇದು ನಿರ್ಣಾಕ ಮಿಲಿಟರಿ ಕೇಂದ್ರವಾಗಿತ್ತು.

*ಟಿಪ್ಪುಸುಲ್ತಾನನ ಆಳ್ವಿಕೆಯಲ್ಲಿ, ಚನ್ನರಾಯನದುರ್ಗವು ಮೈಸೂರು ಸಾಮ್ರಾಜ್ಯದ ಪ್ರಮುಖ ಶಸ್ತ್ರಾಸ್ತ್ರ ಉತ್ಪಾದನಾ ಕೇಂದ್ರವಾಯಿತು.ಇಲ್ಲಿ ಕಬ್ಬಿಣದ ಅದಿರನ್ನು ಕರಗಿಸಿ ಗಂಧಕದೊಂದಿಗೆ ಬೆರೆಸಿ ಆಯುಧಗಳನ್ನು ತಯಾರಿಸುತ್ತಿದ್ದರು. ನಾಲ್ಕು ಮದ್ದುಗುಂಡಿನ (ಆರ್ಡಿನೆನ್ಸ್) ಕಾರ್ಖಾನೆಗಳಿಗೆ ಇಲ್ಲಿಂದ ಸರಬರಾಜು ಮಾಡುತ್ತಿದ್ದರು. ಚನ್ನರಾಯನದುರ್ಗದ ಮಹತ್ವವು ಮೈಸೂರು ಸಾಮ್ರಾಜ್ಯದ ಗನ್‌ಪೌಡರ್ ಪೂರೈಸುವುದರೊಂದಿಗೆ ಅದರ ಪಾತ್ರ ವಿಸ್ತರಿಸಿತು. ಈ ಪ್ರದೇಶದ ಶ್ರೀಮಂತ ಕಬ್ಬಿಣದ ಅದಿರಿನ ನಿಕ್ಷೇಪಗಳು, ಬಂದೂಕುಗಳು ಮತ್ತು ಫಿರಂಗಿಗಳನ್ನು ತಯಾರಿಸಲು ನಿರ್ಣಾಯಕವಾಗಿವೆ, ಈ ಸಂಗತಿಯನ್ನು ಆಂಗ್ಲ ದಾಖಲುದಾರ ಬುಕಾನನ್ ತನ್ನ ಐತಿಹಾಸಿಕ ವರದಿಯಲ್ಲಿ ಪ್ರಸ್ತಾಪಿಸಿದ್ದಾನೆ.

ಪ್ರಸ್ತುತ ಸಂರಕ್ಷಣೆ ಮತ್ತು ಪುನಃಸ್ಥಾಪನೆ

ದಶಕಗಳ ನಿರ್ಲಕ್ಷ್ಯದನಂತರ ಚನ್ನರಾಯನದುರ್ಗದ ವೈಭವವನ್ನು ಮರುಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ. “ನಮ್ಮ ಕೋಟೆ” ಯೋಜನೆಯಡಿಯಲ್ಲಿ, WMG ಫೌಂಡೇಶನ್ ಐತಿಹಾಸಿಕ ಆಕರ್ಷಣೆಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಅದರ ನೈಸರ್ಗಿಕ ಪರಿಸರವನ್ನು ರಕ್ಷಿಸಲು ಕಾರ್ಯಕ್ರಮಗಳನ್ನು ಮುಂದಾಳತ್ವವನ್ನು ತೋರಿದೆ. ಇದರ ಇತಿಹಾಸ, ಮಹತ್ವ ಮತ್ತು ನಯನ ಮನೋಹರ ದೃಶ್ಯಗಳು, ಆದರ್ಶ ವಿಹಾರ, ಚಾರಣ ತಾಣವನ್ನಾಗಿ ಮಾಡಿದೆ. ಇದರ ಪುನರುಜ್ಜೀವನವು ಸುಸ್ಥಿರ ಹಾಗು ಸುಸಜ್ಜಿತ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಂದರ್ಭದಲ್ಲಿ ಕರ್ನಾಟಕದ ಐತಿಹಾಸಿಕ ಕೋಟೆಗಳನ್ನು ಸಂರಕ್ಷಿಸುವ ವ್ಯಾಪಕ ಯೋಜನೆಯಲ್ಲಿ ಭಾಗವಾಗಿದೆ. ಚನ್ನರಾಯನದುರ್ಗ ಕೋಟೆಯ ಮಹಿಮೆಯನ್ನು ತಿಳಿಯಿರಿ. ಗತ ಕಾಲಕ್ಕೆ ಕಾಲಿಟ್ಟು, ಅದರ ವೈಭವ, ನಮ್ಮ ಪರಂಪರೆಯನ್ನು ಮೆಚ್ಚಿಕೊಳ್ಳಿ ಮತ್ತು ಇಲ್ಲಿ ರಮಣೀಯ ಸೌಂದರ್ಯವನ್ನು ವೀಕ್ಷಿಸಿ. ಈ ಕಾಲಾತೀತ ಸಂಪತ್ತನ್ನು ಅನ್ವೇಷಿಸಿ ಮತ್ತು ಮುಂದಿನ ಪೀಳಿಗೆಗೆ ಅದರ ವೈಭವವನ್ನು ಕಾಪಾಡುವಲ್ಲಿ ನಮ್ಮೊಂದಿಗೆ ಸೇರಿ.

 
 
 

Kommentare


bottom of page